ಮೈಸೂರು,ಅಕ್ಟೋಬರ್,25,2020(www.justkannada.in) : ಜನರಿಗೆ ಎದುರಾಗಿರುವ ಕೊರೊನಾ ಸಂಕಷ್ಟದಿಂದ ಮುಕ್ತ ಮಾಡಿ ಸುಖಃ ಸಮೃದ್ಧಿ ನೆಲೆಸಲಿ ಎಂದು ನಾಡಿನ ಜನತೆಯ ಪರವಾಗಿ ತಾಯಿ ಚಾಮುಂಡೇಶ್ವರಿಗೆ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ವಿಶೇಷ ಪೂಜೆ ಸಲ್ಲಿಸಿದರು.
ದೇಶದ ಎಲ್ಲೆಡೆ ನಡೆಯುವ ಆಯುಧ ಪೂಜೆಗಿಂತ ಮೈಸೂರು ಅರಮನೆಯಲ್ಲಿ ನಡೆಯುವ ಆಯುಧ ಪೂಜೆಗೆ ವಿಶೇಷ ಮಹತ್ವವಿದೆ. ಹೀಗಾಗಿ, ಆಯುಧ ಪೂಜೆ ಹಿನ್ನೆಲೆ ಖಾಸಗಿ ದರ್ಬಾರ್ ನಡೆಸಿ ಚಿನ್ನದ ಸಿಂಹಾಸನಕ್ಕೆ ಅಳವಡಿಸಿರುವ ಸಿಂಹವನ್ನು ವಿಸರ್ಜನೆ ಮಾಡಿದರು.
ಅರಮನೆಯಲ್ಲಿ ಆಯುಧಪೂಜೆ ನಡೆದ ಬಗೆ
ಮೈಸೂರು ಅರಮನೆಯಲ್ಲಿ ರಾಜವಂಶಸ್ಥರ ಆಯುಧ ಪೂಜೆ ಮುಂಜಾನೆ ಮುಕ್ತಾಯಗೊಂಡಿತು. ಬೆಳಿಗ್ಗೆ 6 ಗಂಟೆಗೆ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸು ಅರಮನೆಯ ಆನೆ ಬಾಗಿಲಿಗೆ ಆಗಮಿಸಿದ್ದವು. ಬೆಳಿಗ್ಗೆ 6 ಗಂಟೆ 15 ನಿಮಿಷಕ್ಕೆ ಚಂಡಿ ಹೋಮ ಆರಂಭವಾಗಿ, ಬೆಳಿಗ್ಗೆ 9 ಗಂಟೆ 15 ನಿಮಿಷಕ್ಕೆ ಚಂಡಿ ಹೋಮಕ್ಕೆ ಯದುವೀರ್ ಅವರು ಪೂರ್ಣಾವತಿ ಅರ್ಪಿಸಿದರು.
ಸೋಮೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ
ಇದೇ ವೇಳೆ ಮುಂಜಾನೆ 5 ಗಂಟೆ 28 ನಿಮಿಷದಿಂದ 6 ಗಂಟೆ 48 ನಿಮಿಷದೊಳಗೆ ಸಲ್ಲುವ ಶುಭ ಮುಹೂರ್ಥದಲ್ಲಿ ಅರಮನೆಯ ಖಾಸಾ ಆಯುಧಗಳನ್ನು ರಥ ವಾಹನದಲ್ಲಿ ಆನೆ, ಕುದುರೆ, ಒಂಟೆ ಮತ್ತು ಹಸುವಿನೊಡನೆ ಸೋಮೇಶ್ವರ ದೇವಾಲಯಕ್ಕೆ ತರಲಾಯಿತು. ಸೋಮೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ಮತ್ತೆ ಅರಮನೆಯ ಆನೆ ಬಾಗಿಲಿಗೆ ತರಲಾಯಿತು.
ಅರಮನೆಯ ಕಲ್ಯಾಣ ಮಂಟಪದಲ್ಲಿ ಯುದ್ಧ ಸಾಮಾಗ್ರಿಗಳಿಗೆ ಪೂಜೆ
ಶುಭ ಮುಹೂರ್ಥದಲ್ಲಿ ಅರಮನೆಯ ಕಲ್ಯಾಣ ಮಂಟಪದಲ್ಲಿ ಯದುವೀರ್ ಅವರು ರಾಜ ಮಹಾರಾಜರು ಬಳಸುತ್ತಿದ್ದ ಯುದ್ಧ ಸಾಮಗ್ರಿಗಳಿಗೆ ಪೂಜೆ ಸಲ್ಲಿಸಿದರು. ತರುವಾಯ ಅರಮನೆಯ ಸವಾರಿ ತೊಟ್ಟಿಯಲ್ಲಿ ಯದುವೀರ್ ಅವರು ತಾವು ಬಳಸುವ ಕಾರುಗಳು ಸೇರಿದಂತೆ ಆನೆ, ಕುದುರೆ, ಒಂಟೆ, ಹಸುವಿಗೆ ಪೂಜೆ ಸಲ್ಲಿಸಿದರು. ಮಂಗಳವಾದ್ಯ ಹಾಗೂ ಪೊಲೀಸ್ ಬ್ಯಾಂಡ್ ಸಂಗೀತದ ಹಿಮ್ಮೇಳದಲ್ಲಿ ಯದುವೀರ್ ಅವರು ಆಯುಧ ಪೂಜೆಯನ್ನು ಭಕ್ತಿ ಭಾವದಿಂದ ನೆರವೇರಿಸಿದರು.
key words : Spend-Coronation-Prosperity-Yadavir-Special-Worship-Palace