ಬೆಳಗಾವಿ, ಡಿಸೆಂಬರ್ 16,2021(www.justkannada.in): ನೇಕಾರರ ಉತ್ಪನ್ನಗಳಿಗೆ ಸುಸ್ಥಿರ ಮಾರುಕಟ್ಟೆ ಹಾಗೂ ದರ ಒದಗಿಸಲು ಪೂರಕ ಕ್ರಮಗಳನ್ನು ಸರ್ಕಾರ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ತಿಳಿಸಿದರು.
ಇಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ನೇಕಾರರ ಸಮಸ್ಯೆಗಳ ಕುರಿತು ಕರೆದ ಸಭೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿದರು.
ನೇಕಾರರ ಬೇಡಿಕೆಗಳನ್ನು ಪರಿಶೀಲಿಸಿದ ಸಿಎಂ ಬಸವರಾಜ ಬೊಮ್ಮಾಯಿ, ಸರ್ಕಾರದ ವಿವಿಧ ಇಲಾಖೆಗಳಿಗೆ ಅಗತ್ಯವಿರುವ ಬಟ್ಟೆ/ಸೀರೆಗಳನ್ನು ನೇಕಾರರ ಸಾಮರ್ಥ್ಯಕ್ಕೆ ಅನುಗುಣವಾಗಿ ಖರೀದಿಸಲು ಪ್ರಮಾಣವನ್ನು ನಿಗದಿ ಪಡಿಸಲಾಗುವುದು ಎಂದು ತಿಳಿಸಿದರು. ಇದರೊಂದಿಗೆ ಕೈಮಗ್ಗ ಅಭಿವೃದ್ಧಿ ನಿಗಮದ ಮೂಲಕ ಕೈಮಗ್ಗದ ಉತ್ಪನ್ನಗಳಿಗೆ ಡಿಜಿಟಲ್ ವೇದಿಕೆಯಲ್ಲೂ ಮಾರುಕಟ್ಟೆ ಸೌಲಭ್ಯ ಕಲ್ಪಿಸಲು ಕ್ರಮ ವಹಿಸಲಾಗುವುದು ಎಂದು ಅವರು ತಿಳಿಸಿದರು.
ಸಭೆಯಲ್ಲಿ ಕೈಗೊಳ್ಳಲಾದ ಇತರ ನಿರ್ಧಾರಗಳು..
ಗಿರಿಜನ ಉಪ ಯೋಜನೆಯ ಮಾದರಿಯಲ್ಲಿ ವೃತ್ತಿಪರ ನೇಕಾರರಿಗೆ ಸಹಾಯಧನ ನೀಡುವ ಬೇಡಿಕೆಯ ಕುರಿತು ಆರ್ಥಿಕ ಇಲಾಖೆಯೊಂದಿಗೆ ಚರ್ಚಿಸಿ, ಸಕಾರಾತ್ಮಕವಾಗಿ ಸೂಕ್ತ ಆದೇಶ ಹೊರಡಿಸಲಾಗುವುದು. ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯ ಮಾದರಿಯಲ್ಲಿ ವೃತ್ತಿಪರ ಕೂಲಿ ನೇಕಾರರಿಗೂ ವಿವಿಧ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಉದ್ಯಮಗಳಿಗೆ ಅಲ್ಪಪ್ರಮಾಣದ ಸೆಸ್ ವಿಧಿಸುವ ಮೂಲಕ ನೆರವು ನೀಡಲು ಚಿಂತನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಬೊಮ್ಮಾಯಿ ನುಡಿದರು.
ನೇಕಾರರು ವಾಸಿಸುವ ದಾಖಲೆ ರಹಿತ ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮ, ಕಾಲೋನಿಗಳನ್ನಾಗಿ ಪರಿವರ್ತಿಸುವ ಕುರಿತು ಕ್ರಮ ಕೈಗೊಳ್ಳುವಂತೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸಿಎಂ ಬೊಮ್ಮಾಯಿ ಸೂಚಿಸಿದರು.
ಮನೆಯಲ್ಲಿಯೇ ಉದ್ಯೋಗ ನಡೆಸುತ್ತಿರುವ ನೇಕಾರರಿಗೆ ಮಾಲಿನ್ಯ ನಿಯಂತ್ರಣ ಮಂಡಳಿಯ ಅನುಮತಿ ಪಡೆಯುವ ಪ್ರಕ್ರಿಯೆ ಕುರಿತು ಸೂಕ್ತ ಮಾರ್ಗಸೂಚಿಗಳನ್ನು ಹೊರಡಿಸಿ, ನೇಕಾರರ ಕಿರುಕುಳ ತಪ್ಪಿಸಲು ಕ್ರಮ ವಹಿಸುವಂತೆ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳಿಗೆ ಸೂಚಿಸಿದರು.
ನೇಕಾರರಿಗೆ ಸಂಬಂಧಿಸಿದ ಮೂರು ನಿಗಮಗಳನ್ನು ಒಗ್ಗೂಡಿಸಿ ಬಲಪಡಿಸುವ ಬಗ್ಗೆ ಗಂಭೀರ ಚಿಂತನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ನೇಕಾರರ ಮಕ್ಕಳಿಗೆ ವಿದ್ಯಾರ್ಥಿ ವೇತನ, ಆರೋಗ್ಯ ಸೌಲಭ್ಯ ಒದಗಿಸುವ ಬೇಡಿಕೆ ಈಡೇರಿಸಲು ಸಮ್ಮತಿಸಿದ ಸಿಎಂ ಬೊಮ್ಮಾಯಿ, ಶೂನ್ಯ ಬಡ್ಡಿ ದರದಲ್ಲಿ ಸಾಲ ವಿತರಣೆ ಹಾಗೂ ಬಡ್ಡಿ ಸಹಾಯ ಧನ ನೀಡುವ ಯೋಜನೆಯ ಮೊತ್ತ ಹೆಚ್ಚಿಸುವ ಕುರಿತು ಆರ್ಥಿಕ ಇಲಾಖೆಯೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಲಾಕ್ ಡೌನ್ ನಂತರ ರಾಜ್ಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ನೇಕಾರರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ನೀಡಲು ಸಹ ಮುಖ್ಯಮಂತ್ರಿಗಳು ಸಮ್ಮತಿಸಿದರು.
ಮಹಾರಾಷ್ಟ್ರ ಹಾಗೂ ತಮಿಳು ನಾಡು ರಾಜ್ಯಗಳಲ್ಲಿ ನೇಕಾರರಿಗೆ ನೀಡುತ್ತಿರುವ ಸೌಲಭ್ಯಗಳ ಕುರಿತು ವರದಿ ತರಿಸಿಕೊಂಡು ರಾಜ್ಯದ ನೇಕಾರರ ಹಿತಕ್ಕಾಗಿ ಕೈಗೊಳ್ಳಬಹುದಾದ ಕ್ರಮಗಳ ಕುರಿತು ಪರಿಶೀಲಿಸುವುದಾಗಿ ಸಿಎಂ ಬೊಮ್ಮಾಯಿ ತಿಳಿಸಿದರು.
ನೂತನ ಜವಳಿ ಮತ್ತು ಸಿದ್ಧ ಉಡುಪು ನೀತಿಯಡಿ ಸ್ಥಾಪಿಸಲಾಗಿರುವ ಕೌಶಲ್ಯ ಅಭಿವೃದ್ಧಿ ತರಬೇತಿ ಕೇಂದ್ರಗಳನ್ನು ಕೌಶಲ್ಯಾಭಿವೃದ್ಧಿ ಇಲಾಖೆಗೆ ವರ್ಗಾವಣೆ ಮಾಡಿರುವುದನ್ನು ರದ್ದುಪಡಿಸಿ, ಜವಳಿ ಇಲಾಖೆಯಡಿ ಮುಂದುವರೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಭೆಯಲ್ಲಿ ಸಚಿವರಾದ ಗೋವಿಂದ ಎಂ. ಕಾರಜೋಳ, ಶಿವರಾಮ ಹೆಬ್ಬಾರ, ಶಂಕರ ಪಾಟೀಲ ಮುನೇನಕೊಪ್ಪ, ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಸಿದ್ದು ಸವದಿ, ಶಾಸಕರು, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐ.ಎಸ್.ಎನ್. ಪ್ರಸಾದ್, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ ಪ್ರಸಾದ್ ಮತ್ತು ಇತರ ಹಿರಿಯ ಅಧಿಕಾರಿಗಳು ಹಾಗೂ ನೇಕಾರ ಮುಖಂಡರು ಭಾಗವಹಿಸಿದ್ದರು.
Key words: Measures – provide- sustainable- market – price – weavers-CM-Basavaraja Bommai