ಬೆಂಗಳೂರು,ನವೆಂಬರ್,26,2021(www.justkannada.in): ಕೋಮುವಾದ, ಜಾತಿ ತಾರತಮ್ಯ. ಮೂಢ ನಂಬಿಕೆ, ಕಂದಾಚಾರ ಮೊದಲಾದ ಸಾಮಾಜಿಕ ಪಿಡುಗುಗಳೆಲ್ಲ ಮತ್ತೆ ತಲೆ ಎತ್ತಲು ಪ್ರಯತ್ನಿಸುತ್ತಿರುವ ಈ ಹೊತ್ತಿನಲ್ಲಿ ಅದರ ವಿರುದ್ಧದ ಹೋರಾಟಕ್ಕೆ ನಮಗಿರುವ ಅಸ್ತ್ರಗಳೆಂದರೆ ಬುದ್ಧ, ಬಸವಣ್ಣ, ಅಂಬೇಡ್ಕರ್ ಮೊದಲಾದವರ ತತ್ವ-ಸಿದ್ಧಾಂತಗಳು. ಇದರ ಮೂಲಕವಷ್ಟೇ ಸಂವಿಧಾನದ ಮೂಲ ಆಶಯವಾದ ಸಮಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯ ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ನುಡಿದರು.
ಸಂವಿಧಾನ ದಿನ ಪತ್ರಿಕಾ ಹೇಳಿಕೆ ಮೂಲಕ ನಾಡಿನ ಸಮಸ್ತ ಬಂಧುಗಳಿಗೆ ಸಂವಿಧಾನದ ದಿನದ ಶುಭಾಶಯ ಕೋರಿದ ಮಾಜಿ ಸಿಎಂ ಸಿದ್ಧರಾಮಯ್ಯ. ಹೇಳಿದ್ದಿಷ್ಟು…
ಪ್ರಜಾಪ್ರಭುತ್ವ ಉಳಿಯಬೇಕಾದರೆ ಪ್ರತಿದಿನ ನಮಗೆ ಸಂವಿಧಾನದ ದಿನವಾಗಬೇಕು. ಜಗತ್ತಿನಲ್ಲಿಯೇ ಅತಿದೊಡ್ಡ ಪ್ರಜಾಪ್ರಭುತ್ವ ದೇಶ ಭಾರತ ಎಂಬ ಹೆಮ್ಮೆಯನ್ನು ನಮಗೆ ತಂದುಕೊಟ್ಟಿರುವುದು ನಮ್ಮ ಸಂವಿಧಾನ. ಧರ್ಮನಿರಪೇಕ್ಷತೆ, ಪ್ರಜಾಸತ್ತಾತ್ಮಕ ಮತ್ತುಗಣತಂತ್ರ ಎಂಬ ಮಂತ್ರಗಳ ನಮ್ಮ ಸಂವಿಧಾನದ ಆಧಾರ ಸ್ತಂಭಗಳಾಗಿವೆ.
ಭಾರತ ಸಂವಿಧಾನ ಸಮಾನತೆಯನ್ನು ಸಾರಿ ಹೇಳಿದೆ. ಯಾವುದೇ ವ್ಯಕ್ತಿಇನ್ನೊಬ್ಬ ವ್ಯಕ್ತಿಗಿಂತ ಮೇಲೂ ಅಲ್ಲ ಕೀಳೂ ಅಲ್ಲ. ಹಾಗಾಗಿಯೇ ಒಬ್ಬ ವ್ಯಕ್ತಿಗೆ ಒಂದು ಮತ, ಒಂದು ಮತಕ್ಕೆ ಒಂದು ಮೌಲ್ಯತತ್ವವನ್ನು ಅಳವಡಿಸಲಾಗಿದೆ. ಸಂವಿಧಾನದ ಇಂತಹ ಎಲ್ಲ ಆಶಯಗಳನ್ನು ಎತ್ತಿ ಹಿಡಿಯುವುದು ಇಂದು ನಮ್ಮೆಲ್ಲರ ಮುಂದಿರುವ ಜವಾಬ್ದಾರಿ ಮತ್ತು ಹೊಣೆಗಾರಿಕೆಯಾಗಿದೆ.
ಅಂಬೇಡ್ಕರ್ ಅವರು ತಾವೇ ರಚಿಸಿರುವ ಸಂವಿಧಾನದ ಬುನಾದಿ ಮೇಲೆ ಭವಿಷ್ಯದ ಭಾರತವನ್ನು ನಿರ್ಮಾಣಮಾಡಲು ಬಯಸಿದ್ದರು. ಆದರೆ ಸಂವಿಧಾನವನ್ನು ಮನ:ಪೂರ್ವಕವಾಗಿ ಒಪ್ಪದೆ ಇದ್ದ ಹಿಂದೂ ಧರ್ಮದೊಳಗಿದ್ದ ಒಂದು ವರ್ಗ ಮನುಸ್ಮøತಿ ಆಧಾರದಲ್ಲಿ ಸಮಾಜವನ್ನು ನಿರ್ಮಾಣ ಮಾಡಲು ಹೊರಟಿರುವುದು ಅಂಬೇಡ್ಕರ್ ಅವರಿಗೆ ತಿಳಿದಿತ್ತು. ಈ ಹಿನ್ನೆಲೆಯಲ್ಲಿಯೇ ಅವರು ಹಿಂದೂ ಧರ್ಮವನ್ನು ತ್ಯಜಿಸುವ ನಿರ್ಧಾರ ಕೈಗೊಂಡಿದ್ದರು.
ಪರಿಸ್ಥಿತಿಯಲ್ಲಿ ಹೆಚ್ಚು ಬದಲಾವಣೆಯಾಗಿಲ್ಲ. ಈಗಲೂ ಹಿಂದೂ ಧರ್ಮದೊಳಗಿರುವ ರೋಗಗ್ರಸ್ತ ಮನಸ್ಸುಗಳಿಗೆ ಸಂವಿಧಾನಕ್ಕಿಂತ ಮನುಸ್ಮೃತಿಯೇ ಹೆಚ್ಚು ಪ್ರಿಯವೆನಿಸಿದೆ. ಅದು ಸಾರಿರುವ ಜಾತಿ ವ್ಯವಸ್ಥೆಯ ಬುಡ ಭದ್ರಪಡಿಸುವ ಕೆಲಸವನ್ನು ಈ ವರ್ಗ ಗುಟ್ಟಾಗಿ ಮಾಡುತ್ತಿದೆ.
ಸಂವಿಧಾನವನ್ನು ಬದಲಾವಣೆ ಮಾಡಲಿಕ್ಕಾಗಿಯೇ ನಾವು ಅಧಿಕಾರಕ್ಕೆ ಬಂದಿದ್ದೇವೆ ಎಂದು ಕೇಂದ್ರ ಸಚಿವರೊಬ್ಬರು ಬಹಿರಂಗವಾಗಿ ಹೇಳಿಕೆ ನೀಡುತ್ತಾರೆ. ಈ ದೇಶದ ಪ್ರಧಾನಿಯಾಗಲಿ, ಅವರ ಪಕ್ಷವಾಗಲಿ ಬಾಯಿಮಾತಿಗಾದರೂ ಸಚಿವರ ಸಂವಿಧಾನ ವಿರೋಧಿ ಹೇಳಿಕೆಯನ್ನು ಖಂಡಿಸುವುದಿಲ್ಲ. ಇದರ ಅರ್ಥ ತಮ್ಮ ಬಾಯಿಯಿಂದ ಹೇಳಬೇಕೆಂದಿರುವುದನ್ನು ಅವರು ಈ ಸಚಿವರ ಬಾಯಿಯಿಂದ ಹೇಳಿಸಿದ್ದಾರೆ. ಇದನ್ನು ನಾವು ತಿಳಿದುಕೊಳ್ಳಬೇಕು.
ಇಂತಹವರಿಗೆ ಸಂವಿಧಾನದ ಮೇಲೆ ಗೌರವ ಇಲ್ಲ, ಅದು ಸಾರುವ ಆಶಯಗಳಲ್ಲಿ ನಂಬಿಕೆ ಇಲ್ಲ. ಸಾಮಾಜಿಕ ನ್ಯಾಯದ ಸಿದ್ಧಾಂತ, ಜಾತಿನಾಶ, ಅಸ್ಪೃಶ್ಯತೆಯ ನಿರ್ಮೂಲನೆ ಯಾವುದೂ ಅವರಿಗೆ ಬೇಕಾಗಿಲ್ಲ. ಪಟ್ಟಭದ್ರ ಹಿತಾಸಕ್ತಿಯನ್ನು ಹೊಂದಿರುವ ಯಥಾಸ್ಥಿತಿವಾದಿಗಳು.
ಇಂದು ರಾಷ್ಟ್ರೀಯತೆ ಎಂಬ ಪದ ಹಲವು ವಾದ-ವಿವಾದಗಳು, ಚರ್ಚೆಗಳನ್ನು ಹುಟ್ಟುಹಾಕಿದೆ. ಒಂದು ಸಮುದಾಯ ಅಥವಾ ಒಂದು ಧರ್ಮದ ನೀತಿಗಳೇ ರಾಷ್ಟ್ರೀಯತೆ ಎಂಬಂತೆ ಬಿಂಬಿಸಲಾಗುತ್ತಿದೆ. ಏಕರೂಪದ ಈ ರಾಷ್ಟ್ರೀಯತೆ ನಮ್ಮ ಸಂವಿಧಾನದ ಭದ್ರ ಬುನಾದಿಗೆ ಧಕ್ಕೆಯುಂಟು ಮಾಡಲಿದೆ.
ಧರ್ಮನಿರಪೇಕ್ಷತೆ ಸಂವಿಧಾನದ ಮೂಲ ಆಶಯಗಳಲ್ಲಿ ಒಂದಾಗಿದ್ದು, ಪ್ರತಿಯೊಬ್ಬ ವ್ಯಕ್ತಿಯೂತನಗೆ ಇಷ್ಟವಾದ ಧರ್ಮವನ್ನು ಆಚರಿಸುವ, ಅನುಸರಿಸುವ ಪಾಲಿಸುವ ಹಕ್ಕು ನೀಡಿದೆ. ರಾಜಕಾರಣ ಮತ್ತು ಶಿಕ್ಷಣದಲ್ಲಿ ಧರ್ಮ ಇಣುಕಬಾರದು ಎಂಬುದು ಧರ್ಮನಿರಪೇಕ್ಷತೆಯ ಆಶಯವೂ ಹೌದು. ಭಾರತ ಸಂವಿಧಾನದ ಮೂಲ ಆಶಯವೂ ಇದಾಗಿದೆ. ಸಂವಿಧಾನ ವಿಜ್ಞಾನವನ್ನು ಪ್ರತಿಪಾದಿಸುತ್ತದೆ ಮೂಢನಂಬಿಕೆಯನ್ನಲ್ಲ ಎಂದು ಸಿದ್ಧರಾಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.
ಭಾರತ ಹಲವು ವೈವಿಧ್ಯತೆ, ಆಚಾರ, ವಿಚಾರ, ಸಂಸ್ಕøತಿಗಳನ್ನು ತನ್ನ ಉದರದಲ್ಲಿ ಕಾಪಿಟ್ಟುಕೊಂಡಿದೆ. ಇಂತಹ ವೈವಿಧ್ಯತೆಯಲ್ಲಿ ಏಕತೆಯನ್ನು ಕಾಪಾಡಿಕೊಂಡು ಮುನ್ನಡೆಯಲು ನಾವು ಮತ್ತೊಮ್ಮೆ ಮತ್ತೊಮ್ಮೆ ಸಂಕಲ್ಪ ಮಾಡಬೇಕಾಗಿದೆ.
ಅಭಿವ್ಯಕ್ತಿ ಸ್ವಾತಂತ್ರ್ಯ ನಮ್ಮ ಸಂವಿಧಾನ ನಮಗೆ ನೀಡಿರುವ ಮತ್ತೊಂದು ಮಹತ್ವದ ಕೊಡುಗೆ. ಮಾನವ ಬೆಳವಣಿಗೆಯ ಇತಿಹಾಸದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಅತ್ಯುನ್ನತ ಘಟ್ಟ. ನಮ್ಮ ಸಂವಿಧಾನ ಇದನ್ನು ಯಾವುದೇ ಧರ್ಮ, ಜಾತಿ, ಲಿಂಗ ತಾರತಮ್ಯವಿಲ್ಲದೆ ಕಲ್ಪಿಸಿದೆ. ಈ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವುದು ಈಗ ನಮ್ಮ ಮುಂದಿರುವ ಸವಾಲು ಎಂದರು.
ಸ್ವಾತಂತ್ರ್ಯಕ್ಕಿಂತಲೂ ಮೊದಲು ಸಮಾನತೆ ಸ್ಥಾಪನೆಯಾಗಬೇಕು ಎಂದು ಅಂಬೇಡ್ಕರ್ ಬಯಸಿದ್ದರು. ನಾವು ಕೇವಲ ರಾಜಕೀಯ ಸ್ವಾತಂತ್ರ್ಯದಿಂದ ತೃಪ್ತರಾಗಬಾರದು, ರಾಜಕೀಯ ಪ್ರಜಾತಂತ್ರವನ್ನು ಸಾಮಾಜಿಕ ಪ್ರಜಾತಂತ್ರವನ್ನಾಗಿ ಮಾಡಬೇಕು. ಸಾಮಾಜಿಕ ಪ್ರಜಾಪ್ರಭುತ್ವ ಸ್ಥಾಪನೆಯಾಗದೆ ಇದ್ದರೆ ರಾಜಕೀಯ ಪ್ರಜಾತಂತ್ರ ಯಶಸ್ಸು ಕಾಣಲಾರದು ಎಂದು ಅಂಬೇಡ್ಕರ್ ಎಚ್ಚರಿಸಿದ್ದರು ಎಂದು ಸಿದ್ಧರಾಮಯ್ಯ ಸ್ಮರಿಸಿದರು.
ಭಾರತದಲ್ಲಿ ಸಾಮಾಜಿಕ ಸಮಸ್ಯೆಗಳನ್ನು ಸುಧಾರಿಸದೆ ಆರ್ಥಿಕ ಸುಧಾರಣೆತರಲು ಹೇಗೆ ಸಾಧ್ಯ? ಎಂದು ಡಾ. ಅಂಬೇಡ್ಕರ್ ಕೇಳಿದ್ದರು. ಜಾತಿ ವ್ಯವಸ್ಥೆಯಂತಹ ಭೀಕರ ಸಾಮಾಜಿಕ ರೋಗಕ್ಕೆ ಬಲಿಯಾಗಿರುವ ಭಾರತದ ಅಭಿವೃದ್ದಿ ಕೇವಲ ರಾಜಕೀಯ ಸ್ವಾತಂತ್ರ್ಯದಿಂದ ಸಾಧ್ಯ ಇಲ್ಲ ಎನ್ನುವುದು ಅಂಬೇಡ್ಕರ್ ಅವರ ಸ್ಪಷ್ಟ ನಿಲುವಾಗಿತ್ತು. ಈ ಅಭಿಪ್ರಾಯವೇ ಅಂಬೇಡ್ಕರ್ ಮತ್ತು ಗಾಂಧೀಜಿ ನಡುವಿನ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿತ್ತು.
ಉಳ್ಳವರ ಕೈಗೆ ರಾಜಕೀಯ ಅಧಿಕಾರವನ್ನು ನೀಡುವುದರಿಂದ ಬಡವರು, ಜಾತಿ ವ್ಯವಸ್ಥೆಗೆ ಬಲಿಯಾದ ಶೋಷಿತರು ಇನ್ನಷ್ಟು ಅನ್ಯಾಯ ಶೋಷಣೆಗೊಳಗಾಗುತ್ತಾರೆ. ಇದನ್ನು ತಪ್ಪಿಸಬೇಕಾದರೆ ಮೊದಲು ಸಾಮಾಜಿಕ ಸ್ವಾತಂತ್ರ್ಯವನ್ನು ಪಡೆದುಕೊಂಡು ಸಾಮಾಜಿಕ ಮತ್ತು ಆರ್ಥಿಕ ಸಮಾನತೆಯನ್ನು ಸಾಧಿಸಬೇಕು ಎನ್ನುವುದು ಅಂಬೇಡ್ಕರ್ ಅವರ ಸ್ಪಷ್ಟ ನಿಲುವಾಗಿತ್ತು. ಸಾಮಾಜಿಕ ಮತ್ತು ಆರ್ಥಿಕ ತಾರತಮ್ಯವನ್ನು ನಿವಾರಣೆ ಮಾಡುವುದು ನಮ್ಮಕರ್ತವ್ಯವಾಗಿದೆ.
ಬಸವಣ್ಣ ಮತ್ತು ಅಂಬೇಡ್ಕರ್ ವೈಯಕ್ತಿಕವಾಗಿ ನನಗೆ ಜ್ಞಾನಗುರುಗಳು, ನಾನು ಬಸವ ಜಯಂತಿಯ ದಿನವೇ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದು. ಸಂವಿಧಾನದ ಆಶಯಗಳನ್ನು ಜಾರಿಗೆ ತರುವುದೆಂದರೆ ಅಂಬೇಡ್ಕರ್ ಆಶಯಗಳನ್ನು ಜಾರಿಗೆ ತಂದ ಹಾಗೆ. ಅದೇರೀತಿ ಅಂಬೇಡ್ಕರ್ ಆಶಯಗಳನ್ನು ಜಾರಿಗೆ ತರುವುದೆಂದರೆ ಅದು ಬಸವಣ್ಣನ ಚಿಂತನೆಗಳನ್ನು ಜಾರಿಗೆ ತಂದ ಹಾಗೆ.
ಬಸವಣ್ಣ ಮತ್ತು ಅಂಬೇಡ್ಕರ್ ಸಿದ್ಧಾಂತಗಳ ನಡುವೆ ಹಲವಾರು ಬಗೆಯ ಸಾಮ್ಯತೆಗಳನ್ನು ಕಂಡುಕೊಳ್ಳಲು ಸಾಧ್ಯ. ಬಸವಣ್ಣನವರು ಕಟ್ಟಿ ಬೆಳೆಸಿದ ಅನುಭವ ಮಂಟಪಕ್ಕೂ, ಅಂಬೇಡ್ಕರ್ ಸಂವಿಧಾನದ ಮೂಲಕ ನೀಡಿರುವ ಪ್ರಜಾಪ್ರಭುತ್ವ ವ್ಯವಸ್ಥೇಗೂ ಸಾಮ್ಯತೆಗಳಿವೆ. ಇಬ್ಬರ ದೃಷ್ಟಿಯಲ್ಲಿಯೂ ಸಾಮಾನ್ಯ ಜನರೇ ಪ್ರಭುಗಳೂ. ಇಬ್ಬರೂ ಜಾತಿ-ಮತ ಮೀರಿದ ಸಮಾನತೆಯ ಹರಿಕಾರರು. ಇಬ್ಬರೂ ಸಮಾಜದ ಪಿಡುಗುಗಳಾದ ವರ್ಣ ವ್ಯವಸ್ಥೇ, ಜಾತಿತಾರತಮ್ಯ ಮತ್ತು ವೈದಿಕಷಾಹಿಯನ್ನು ವಿರೋದಿಸಿದ್ದರು.
ಕೋಮುವಾದ, ಜಾತಿತಾರತಮ್ಯ. ಮೂಢ ನಂಬಿಕೆ, ಕಂದಾಚಾರ ಮೊದಲಾದ ಸಾಮಾಜಿಕ ಪಿಡುಗುಗಳೆಲ್ಲ ಮತ್ತೆ ತಲೆಎತ್ತಲು ಪ್ರಯತ್ನಿಸುತ್ತಿರುವ ಈ ಹೊತ್ತಿನಲ್ಲಿ ಅದರ ವಿರುದ್ಧದ ಹೋರಾಟಕ್ಕೆ ನಮಗಿರುವ ಅಸ್ತ್ರಗಳೆಂದರೆ ಬುದ್ಧ, ಬಸವಣ್ಣ, ಅಂಬೇಡ್ಕರ್ ಮೊದಲಾದವರ ತತ್ವ-ಸಿದ್ಧಾಂತಗಳು. ಇದರ ಮೂಲಕವಷ್ಟೇ ಸಂವಿಧಾನದ ಮೂಲ ಆಶಯವಾದ ಸಮಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯ. ನಾವು ಸಂವಿಧಾನವನ್ನು ರಕ್ಷಿಸಿದರೆ ಸಂವಿಧಾನ ನಮ್ಮನ್ನು ರಕ್ಷಿಸುತ್ತದೆ ಎಂದು ಸಿದ್ಧರಾಮಯ್ಯ ನುಡಿದಿದ್ದಾರೆ.
Key words: Samasamaja – built – Buddha-Basavanna -Ambedkar – former CM -Siddaramaiah.