ಮೈಸೂರು,ಜನವರಿ,1,2021(www.justkannada.in): ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿ ಮಾಡಲು ಹೊರಟಿರುವ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ರಾಜ್ಯಸಭಾ ಕಾಂಗ್ರೆಸ್ ಸದಸ್ಯ ಪ್ರೊ.ಹನುಮಂತಯ್ಯ ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಪ್ರೊ.ಹನುಮಂತಯ್ಯ ಅವರು, ಬಸವಣ್ಣನ ಹಾದಿಯಾಗಿ ಅನೇಕ ಕವಿಗಳು, ಸಂತರು ಮತಾಂತರ ಆಗಿದ್ದಾರೆ. ಆದರೆ ಸರ್ಕಾರ ದುರುದ್ದೇಶದಿಂದ ಕಾಯ್ದೆ ಜಾರಿ ಮಾಡ್ತಿದೆ.ಈ ಬಗ್ಗೆ ಸರ್ಕಾರ ಅಧ್ಯಯನ ನಡೆಸಿದ್ಯಾ.? ಆಮೀಷದ ಮತಾಂತರ, ಬಲವಂತದ ಮತಾಂತರದ ಅಂಕಿಅಂಶ ಸರ್ಕಾರದ ಬಳಿ ಇದ್ಯಾ.? ಇದು ತಳಮಟ್ಟದ ಸಮುದಾಯಕ್ಕೆ ಅವಮಾನ ಮಾಡುವ ಕೆಲಸ. ಸರ್ಕಾರ ಸುಖಾಸುಮ್ಮನೆ ಸಮಾಜದಲ್ಲಿ ಗೊಂದಲ ಸೃಷ್ಠಿ ಮಾಡ್ತಿದೆ. ಈ ಬಗ್ಗೆ ಅಧ್ಯಯನ ನಡೆಸಿ ವರದಿ ಬಿಡುಗಡೆ ಮಾಡಿ. ಆ ಬಳಿಕ ಕಾಯ್ದೆ ಜಾರಿ ಮಾಡಲು ಮುಂದಾಗಿ ಎಂದು ಸಲಹೆ ನೀಡಿದರು.
ಇದು ಕೇವಲ ಜನರ ಡೈವರ್ಟ್ ಮಾಡುವ ಕೆಲಸ. ಇದು ಆರ್.ಎಸ್.ಎಸ್ ನವರ ಹಿಡನ್ ಅಜೆಂಡಾ. ಈ ಕಾಯ್ದೆ ಜಾರಿಗೆ ತರೋದನ್ನ ನಾವು ತೀವ್ರವಾಗಿ ಖಂಡಿಸ್ತಿವಿ. ಇಂತಹ ಚೀಪ್ ಗಿಮಿಕ್ ಗಳನ್ನ ಬಿಟ್ಟು ನಿಜವಾದ ಸಮಸ್ಯೆಗಳ ಬಗ್ಗೆ ಗಮನಹರಿಸಿ ಎಂದು ಸರ್ಕಾರದ ವಿರುದ್ಧ ಪ್ರೊ.ಹನುಮಂತಯ್ಯ ಹರಿಹಾಯ್ದರು.
ರಾಜ್ಯ ಮತ್ತು ದೇಶದ ಮಾಧ್ಯಮಗಳಲ್ಲಿ ವಿರೋಧ ಪಕ್ಷಗಳು ಸಂಸತ್ತಿನ ಅಧಿವೇಶನದ ಚರ್ಚೆಯಲ್ಲಿ ಭಾಗಿಯಾಗುತ್ತಿಲ್ಲ ಎಂದು ಬಿಜೆಪಿ ನಾಯಕರು ಆರೋಪಿಸುತ್ತಿದ್ದಾರೆ.ಆದರೆ ಸಂಸತ್ತಿನ ಉಭಯ ಸದನಗಳಲ್ಲಿ ನಡೆಯುವ ಚರ್ಚೆಯ ಬಗ್ಗೆ ವಿರೋಧ ಪಕ್ಷಗಳಿಗೆ ನಂಬಿಕೆಯೇ ಇಲ್ಲದಂತಾಗಿದೆ. ಸಂಸತ್ ಅಧಿವೇಶನ ಸಮರ್ಪಕವಾಗಿ ನಡೆಯದಂತೆ ಆಡಳಿತ ಪಕ್ಷ ನಡೆದುಕೊಂಡಿತು. ಕೇಂದ್ರ ಸರ್ಕಾರ ಬಹುತೇಕ ಕಾಯ್ದೆಗಳನ್ನು ಜಾರಿಗೊಳಿಸುವಾಗ ಪ್ರತಿ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ವಿವಾದಿತ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವ ವಿಚಾರದಲ್ಲೂ ಪ್ರತಿಪಕ್ಷಗಳನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ. ಕೇವಲ ಎರಡು ನಿಮಿಷದಲ್ಲಿ ವಿವಾದಿತ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆದಿರುವುದಾಗಿ ಘೋಷಣೆ ಮಾಡಲಾಯಿತು.
ಆದರೆ ಯಾವ ಕಾರಣಕ್ಕಾಗಿ ಹಿಂಪಡೆಯಲಾಯಿತು ಎಂಬುದರ ಚರ್ಚೆಗೆ ಅವಕಾಶವನ್ನು ನೀಡಲಿಲ್ಲ. ಅಗತ್ಯ ವಸ್ತುಗಳ ಬೆಲೆ ಏರಿಕೆ ಚರ್ಚೆಗೂ ಅವಕಾಶ ಕೊಡಲಿಲ್ಲ. ಈ ಬಗ್ಗೆ ಧ್ವನಿ ಎತ್ತಿದ 12 ಸಂಸದರನ್ನು ಅಮಾನತು ಮಾಡಲಾಯಿತು. ಯಾವುದೇ ಗಲಾಟೆ ಮಾಡದ ಸಂಸದರನ್ನು ಅಮಾನತು ಮಾಡಲಾಗಿದೆ. ಆ ಮೂಲಕ ಸಂಸದರ ಬಗ್ಗೆ ತಪ್ಪು ಸಂದೇಶ ರವಾನಿಸುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಿದೆ. ಹಿಂದಿನ ಅಧಿವೇಶನದ ತಪ್ಪು ಮುಂದಿಟ್ಟುಕೊಂಡು ಆರು ತಿಂಗಳ ಬಳಿಕವೂ ಸಂಸದರನ್ನು ಅಮಾನತು ಮಾಡಿರುವುದು ಪ್ರಜಾಪ್ರಭುತ್ವ ವಿರೋಧಿಯಾಗಿದೆ ಎಂದು ಕಿಡಿಕಾರಿದರು.
ದೆಹಲಿಯಲ್ಲಿ ರೈತರು ನಿರಂತರವಾಗಿ ನಡೆಸಿದ ಪ್ರತಿಭಟನೆಯಲ್ಲಿ 700ಕ್ಕೂ ಹೆಚ್ಚು ರೈತರು ಸಾವನ್ನಪ್ಪಿದ್ದಾರೆ. ಸಾವನ್ನಪ್ಪಿದ ರೈತರಿಗೆ ಸೂಕ್ತ ಪರಿಹಾರಕ್ಕಾಗಿ ಪ್ರತಿಪಕ್ಷಗಳು ಆಗ್ರಹಿಸಿವೆ. ಆದರೆ ಸಾವನ್ನಪ್ಪಿರುವ ರೈತರ ದಾಖಲೆಯನ್ನು ಸರ್ಕಾರ ಇಟ್ಟಿಲ್ಲ.ಎಷ್ಟು ರೈತರು ಸಾವನ್ನಪ್ಪಿದ್ದಾರೆಂಬ ಮಾಹಿತಿ ಸರ್ಕಾರದ ಬಳಿಯಿಲ್ಲ. ಉತ್ತರ ಪ್ರದೇಶದಲ್ಲಿ ಪ್ರತಿಭಟನಾ ನಿರತ ರೈತರ ಮೇಲೆ ವಾಹನ ಹತ್ತಿಸಿದ ಪ್ರಕರಣ ಪೂರ್ವ ನಿಯೋಜಿತ ಎಂದು ಬಹಿರಂಗವಾಗಿದೆ. ಪ್ರಕರಣದಲ್ಲಿ ಕೇಂದ್ರ ಸಚಿವ ಅಜಯ್ ಮಿಶ್ರಾರ ಪುತ್ರನ ಪಾತ್ರವಿರುವುದು ಸಾಬೀತಾಗಿದೆ. ಆದರೂ ಪ್ರಕರಣವನ್ನು ಮುಚ್ಚಿಹಾಕಲು ಕೇಂದ್ರ ಹಾಗೂ ಉತ್ತರ ಪ್ರದೇಶ ಸರ್ಕಾರಗಳು ಹುನ್ನಾರ ನಡೆಸಿವೆ ಎಂದು ಎಲ್ ಹನುಮಂತಯ್ಯ ಆರೋಪಿಸಿದರು.
ಯುವತಿಯರ ಮದುವೆ ವಯಸ್ಸು 21ಕ್ಕೆ ಏರಿಕೆಗೆ ವಿರೋಧ.
ಮಹಿಳೆಯರ ಮದುವೆ ವಯಸ್ಸನ್ನು 21ಕ್ಕೆ ಏರಿಸಿರುವ ಕೇಂದ್ರ ಸರ್ಕಾರದ ನಿರ್ಧಾರ ಅವೈಜ್ಞಾನಿಕವಾಗಿದೆ. ಮಹಿಳೆಯರ ವಯಸ್ಸನ್ನು 18 ವರ್ಷಕ್ಕೆ ನಿಗಧಿ ಪಡಿಸಿರುವುದನ್ನೇ ಇನ್ನೂ ಸರಿಪಡಿಸಲು ಸಾಧ್ಯವಾಗಿಲ್ಲ. 18 ವರ್ಷಕ್ಕೆ ಮೊದಲೇ ಹೆಣ್ಣು ಮಕ್ಕಳನ್ನು ಮದುವೆ ಮಾಡಿದ ಸಾಕಷ್ಟು ಉದಾಹರಣೆಗಳಿವೆ.ಆದರೆ ಈ ಬಗ್ಗೆ ಗಮನ ಹರಿಸದ ಕೇಂದ್ರ ಯಾವುದೇ ಸಲಹೆ ಸೂಚನೆ ಪಡೆಯದ ಕೇಂದ್ರ ಸರ್ಕಾರ ಮಹಿಳೆಯರ ವಯಸ್ಸಿನ್ನು 21 ವರ್ಷಕ್ಕೆ ನಿಗಧಿ ಮಾಡಿರುವ ಕ್ರಮ ಸರಿಯಲ್ಲ. ಈ ಬಗ್ಗೆ ವ್ಯಾಪಕ ಚರ್ಚೆಯಾಗಬೇಕು. ಸಾಧಕಬಾಧಕಗಳ ಚರ್ಚೆಯಾಗದೇ ಮಹಿಳೆಯರ ಮದುವೆ ವಯಸ್ಸನ್ನು 21 ವರ್ಷಕ್ಕೆ ನಿಗದಿ ಮಾಡಬಾರದು ಎಂದು ಪ್ರೊ. ಎಲ್ ಹನುಮಂತಯ್ಯ ಖಂಡಿಸಿದರು.
Key words: condemnation – conversion prohibition act- Rajya Sabha-member -Prof. Hanumanthaiah -against -state government.