ಮೈಸೂರು,ನವೆಂಬರ್,27,2021(www.justkannada.in): ಮಾಜಿ ಮೇಯರ್ ನಾರಾಯಣ್ ರವರ ಆತ್ಮಚರಿತ್ರೆ ಕುರಿತು “ಪೌರ ಬಂಧು” ಕೃತಿಯನ್ನ ವಿಪಕ್ಷ ನಾಯಕ ಸಿದ್ಧರಾಮಯ್ಯ ಬಿಡುಗಡೆಗೊಳಿಸಿದರು.
ಮೈಸೂರು ವಿಶ್ವವಿದ್ಯಾನಿಲಯದ ಎನ್.ರಾಚಯ್ಯ ಅಧ್ಯಯನ ಪೀಠದಿಂದ ಮಾನಸಗಂಗೋತ್ರಿಯ ಸೆನೆಟ್ ಭವನದಲ್ಲಿ ಸಮಾರಂಭ ಆಯೋಜನೆ ಮಾಡಲಾಗಿತ್ತು. ದೀಪಾ ಬೆಳಗಿಸುವ ಮೂಲಕ ಮಾಜಿ ಸಿಎಂ ಸಿದ್ಧರಾಮಯ್ಯ ಕಾರ್ಯಕ್ರಮ ಉದ್ಘಾಟಿಸಿ, ಕೃತಿ ಲೋಕಾರ್ಪಣೆ ಮಾಡಿದರು.
ಸಮಕಾಲೀನ ಕರ್ನಾಟಕದಲ್ಲಿ ಪೌರಕಾರ್ಮಿಕರ ಸ್ಥಿತಿಗತಿಗಳು ವಿಚಾರ ಸಂಕಿರಣ ನಡೆಯಿತು. ಕಾರ್ಯಕ್ರಮದಲ್ಲಿ ಕುಲಪತಿ ಪ್ರೋ ಹೇಮಂತ್ ಕುಮಾರ್, ಶಾಸಕ ನಾಗೇಂದ್ರ, ಮಾಜಿ ಸಂಸದ ಧ್ರುವನಾರಾಯಣ್, ಮಾಜಿ ಮೇಯರ್ ನಾರಾಯಣ್ ಸೇರಿ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.
ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ನಾರಾಯಣ್ ಪೌರಕಾರ್ಮಿಕ ವರ್ಗಕ್ಕೆ ಸೇರಿದವರು. ಅವರ ತಂದೆ, ತಾಯಿ ಪೌರಕಾರ್ಮಿಕರಾಗಿದ್ದರು. ನಾರಾಯಣ್ ಪೌರಕಾರ್ಮಿಕರ ಅಭಿವೃದ್ಧಿಗಾಗಿ ಹೋರಾಟ ಮಾಡ್ತಾ ಬಂದಿದ್ದಾರೆ. ನನಗೆ ಮತ್ತು ಪೌರಕಾರ್ಮಿಕರ ನಡುವೆ ಸಂಬಂಧ ಬೆಳೆಯಲು ನಾರಾಯಣ್ ಕಾರಣ. ನನ್ನ ಭೇಟಿಯಾದಾಗೆಲ್ಲಾ ಪೌರಕಾರ್ಮಿಕರ ಸಮಸ್ಯೆ ಬಗ್ಗೆ ಚರ್ಚೆ ಮಾಡ್ತಿದ್ರು. ಬಹುಮತ ಇಲ್ಲದಿದ್ರೂ ಮಹಳಷ್ಟು ಜನ ಕಾರ್ಪೋರೇಟರ್ ಬೆಂಬಲಿಸಿ ಮೇಯರ್ ಮಾಡಿದ್ರು. ಆಗ ನಮ್ಮ ಸರ್ಕಾರ ಅಧಿಕಾರದಲ್ಲಿರಲಿಲ್ಲ. ನಾನು ಹಠ ಮಾಡಿ ನಾರಾಯಣ್ ಅವರ ಮೇಯರ್ ಮಾಡಿದೆ. ಕಟ್ಟಕಡೆಯ ಮನುಷ್ಯನನ್ನು ಮೊದಲ ಪ್ರಜೆ ಮಾಡಿದೆ. ಅವರೂ ಆ ಜವಾಬ್ದಾರಿಯನ್ನ ಬಳಸಿಕೊಂಡು ಪೌರಕಾರ್ಮಿಕರನ್ನ ಸಂಘಟಿಸಿ, ಸಮಸ್ಯೆ ಬಗೆಹರಿಸಲು ಮುಂದಾದರು. ಅವರ ಸಾರ್ವಜನಿಕ ಬದುಕಿನಲ್ಲಿ ಮರೆಯಲಾಗದ ಹೆಜ್ಜೆ ಗುರುತು ಬಿಟ್ಟಿದ್ದಾರೆ ಎಂದರು.
ಕೆಲವೊಂದು ಸಾರಿ ಚಳುವಳಿ ಮಾಡ್ಬೇಡ ಅಂದ್ರೂ ಮಾಡಿದ್ದರು. ಪೌರಕಾರ್ಮಿಕರಿಗೆ ನ್ಯಾಯ ದೊರಕಿಸಿಕೊಡೊದು ಮುಖ್ಯ ಅಂತಿದ್ದರು. ಪೌರಕಾರ್ಮಿಕರ ಅಭಿವೃದ್ಧಿ ನಿಗಮ ರಚನೆಗೆ ಒತ್ತಾಯ ಮಾಡಿ ಮಾಡಿಸಿದ್ದರು. ಪೌರಕಾರ್ಮಿಕರನ್ನ ಸಿಂಗಾಪೂರ್ ಗೆ ಕಳಿಸುವ ಕೆಲಸ ಮಾಡಿದ್ದೆ. ಇದಕ್ಕೆ ಕೆಲ ಐಎಎಸ್ ಅಧಿಕಾರಿಗಳು ವಿರೋಧ ಮಾಡಿದ್ದರು. ನಾರಾಯಣ ದಸರಾದಲ್ಲಿ ಕುದುರೆ ಮೇಲೆ ಕೂರು ಅಂದಿದ್ದೆ. ಅವರು ಹೆದರಿಕೊಂಡು ಬೇಡ ಅಂತಿದ್ದರು. ನಾನು ಅವರಿಗೆ ಧೈರ್ಯ ಹೇಳಿ ಕುದುರೆ ಸವಾರಿ ಮಾಡಿಸಿದ್ದೆ. ಒಬ್ಬ ಹಿಂದುಳಿದ ವರ್ಗದ ವ್ಯಕ್ತಿ ಮೇಯರ್ ಆಗಿ, ಕುದುರೆ ಮೇಲೆ ಕೂತು ದಸರಾದಲ್ಲಿ ಮೆರವಣಿಗೆ ಮಾಡಿಸಿದ್ದು ನನಗೆ ಖುಷಿ ಕೊಟ್ಟಿದ್ದು ಎಂದು ಸಿದ್ಧರಾಮಯ್ಯ ಸ್ಮರಿಸಿದರು.
ನಾರಾಯಣ್ ನನ್ನು ಮೇಯರ್ ಮಾಡಿದ್ದು ನನ್ನ ಕಮಿಟ್ ಮೆಂಟ್. ಸಂವಿಧಾನಕ್ಕೆ ಗೌರವಿಸಿ ಕಟ್ಟಕಡೆಯ ವ್ಯಕ್ತಿಯನ್ನ ಮೇಯರ್ ಮಾಡಿದೆ. ಈಗ ಕೆಲ ನಾಯಕರು ಅಧಿಕಾರಕ್ಕಾಗಿ ಬೇರೆ ಪಕ್ಷ ಸೇರಿದ್ದಾರೆ. ಸ್ವಾರ್ಥಕ್ಕೋಸ್ಕರ ಸಂವಿಧಾನ ಬದಲಾವಣೆ ಮಾಡುವ ಪಕ್ಷ ಸೇರಿದ್ದಾರೆ. ಸಂವಿಧಾನ ಉಳಿದ್ರೆ ಮಾತ್ರ ನಾವೆಲ್ಲ ಉಳಿಯೋದು. ಇಲ್ಲವಾದ್ರೆ ಕೈಗೆ ಚಿಪ್ಪು ಕೊಡ್ತಾರೆ. ಇದನ್ನ ನಾನು ಹೇಳಿದ್ದೆ, ಅದಕ್ಕೆ ನನ್ನ ವಿರುದ್ಧ ಪ್ರತಿಭಟನೆ ಮಾಡಿ ಪ್ರತಿಕೃತಿ ದಹಿಸಿದ್ದರು.
ಯುವಕರು ಇದನ್ನ ಅರ್ಥ ಮಾಡಿಕೊಳ್ಳಬೇಕು. ಎಲ್ಲರಿಗೂ ಸಾಮಾಜಿಕ ಆರ್ಥಿಕ ಸ್ವಾತಂತ್ರ್ಯ ಸಿಗಬೇಕು. ಮತ್ತೆ ಹಣ ಇರುವವರ ಬಳಿ ಅಧಿಕಾರ ಹೋದ್ರೆ ಮತ್ತೆ ಶೋಷಣೆ ಪ್ರಾರಂಭ ಆಗುತ್ತೆ. ಹಾಗಾಗಿ ಎಲ್ಲಾ ಯುವಕರು ಸಂವಿಧಾನ ಓದಬೇಕು. ಒಂದು ವೇಳೆ ಭಾರತದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಹುಟ್ಟದಿದ್ರೆ, ಸಂವಿಧಾನ ಕೊಡದಿದ್ರೆ ಸಾಮಾಜಿಕ ನ್ಯಾಯ ಸಿಕ್ತಿತ್ತಾ.? ಅಂತಹ ಸಂವಿಧಾನವನ್ನ ಬದಲಾವಣೆ ಮಾಡ್ತಿವಿ ಅನ್ನೋದು ಎಷ್ಟು ಸರಿ. ಅದಕ್ಕೆ ನಾನು ಅನೇಕ ಬಾರಿ ಹೇಳಿದ್ದೇನೆ. ಸಂವಿಧಾನ ಬದಲಾವಣೆ ಆದರೆ ರಕ್ತ ಕ್ರಾಂತಿ ಆಗುತ್ತೆ ಅಂತ ಎಚ್ಚರಿಕೆ ನೀಡಿದ್ದೇನೆ. ಸಂವಿಧಾನ ಕೆಟ್ಟವರ ಕೈಯಲ್ಲಿ ಇದ್ದಾಗ ಕೆಟ್ಟದಾಗುತ್ತೆ ಎಂದು ಸಿದ್ಧರಾಮಯ್ಯ ನುಡಿದರು.
Key words: mysore university-former cm- Siddaramaiah – released – book- “Paura Bandhu