ಬೆಂಗಳೂರು, ಅಕ್ಟೋಬರ್ 27, 2021 (www.justkannada.in): ಸ್ಟೈಲ್ ಕಿಂಗ್ ರಜನಿಕಾಂತ್ ಅವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ದೊರೆತಿದೆ. ಪ್ರಶಸ್ತಿಯನ್ನು ಸ್ವೀಕರಿಸುವಾಗ ರಜನಿಕಾಂತ್ ಅವರು ತಾವು ಬಸ್ ನಿರ್ವಾಹಕರಾಗಿ ಸೇವೆ ಸಲ್ಲಿಸುತ್ತಿದ್ದ ಕಾಲದಲ್ಲಿ ತಮ್ಮ ನಟನಾ ಕೌಶಲ್ಯವನ್ನು ಗುರುತಿಸಿ, ಸಿನಿಮಾಗಳಲ್ಲಿ ನಟನೆ ಮಾಡಲು ಪ್ರೋತ್ಸಾಹಿಸಿದಂತಹ ತಮ್ಮ ಸ್ನೇಹಿತ ಹಾಗೂ ಸಹೋದ್ಯೋಗಿ ಕರ್ನಾಟಕದ ರಾಜ್ ಬಹದ್ದೂರ್ ಅವರನ್ನು ಸ್ಮರಿಸಿ, ಪ್ರಶಸ್ತಿಯನ್ನು ಅವರಿಗೆ ಸಮರ್ಪಿಸಿದರು. ಹಾಗಾದರೆ ಯಾರು ಆ ರಾಜ್ ಬಹದ್ದೂರ್?
ಪಿ. ರಾಜ್ ಬಹದ್ದೂರ್ ಅವರು ಬೆಂಗಳೂರು ಮಹಾನಗರ ಸಾರಿಗೆ ನಿಗಮದ (ಬಿಎಂಟಿಸಿ) ನಿವೃತ್ತ ಬಸ್ ಚಾಲಕರಾಗಿದ್ದು, ಪ್ರಸ್ತುತ ೭೬ ವರ್ಷ ವಯಸ್ಸಿನ ಅವರು ಚಾಮರಾಜಪೇಟೆಯಲ್ಲಿ ವಾಸವಾಗಿದ್ದಾರೆ. ರಜನಿಕಾಂತ್ ಅವರು ಬಿಎಂಟಿಸಿ ಬಸ್ ನಿರ್ವಾಹಕರಾಗಿ ಕೆಲಸ ನಿರ್ವಹಿಸುತ್ತಿದ್ದ ಕಾಲದಲ್ಲಿ ರಾಜ್ ಬಹದ್ದೂರ್ ಅವರು ರಜನಿಕಾಂತ್ ಅವರನ್ನು ಪ್ರೋತ್ಸಾಹಿಸಿ ಸಿನಿಮಾರಂಗಕ್ಕೆ ತಳ್ಳಿದರಂತೆ. ರಾಜ್ ಬಹದ್ದೂರ್ ಅವರು ಹಿಂದೆ ಬೆಂಗಳೂರು ಸಾರಿಗೆ ಸೇವೆ (ಬಿಟಿಸಿ) ಎಂದು ಗುರುತಿಸಿಕೊಂಡಿದ್ದ, ಪ್ರಸ್ತುತ ನಿಗಮವಾಗಿರುವ ಬಿಎಂಟಿಸಿಯಲ್ಲಿ ಬಸ್ ಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದರು, ರಜನಿಕಾಂತ್ ಬಸ್ ನಿರ್ವಾಹಕರಾಗಿದ್ದರು.
ಬೆಂಗಳೂರಿನಲ್ಲಿರುವ ರಾಜ್ ಬಹದ್ದೂರ್ ಅವರು ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದ ತಮ್ಮ ಆತ್ಮೀಯ ಸ್ನೇಹಿತ ರಜನಿಕಾಂತ್ ಅವರನ್ನು ಚೆನ್ನೈಗೆ ತೆರಳಿ ಭೇಟಿ ಮಾಡಲು ತಮ್ಮ ಬ್ಯಾಗ್ ಅನ್ನು ಪ್ಯಾಕ್ ಮಾಡಿಕೊಳ್ಳುತ್ತಿದ್ದರು. ಆಗ ಮಾಧ್ಯಮದೊಂದಿಗೆ ಮಾತನಾಡಿದ ಅವರು, “ರಜನಿಕಾಂತ್ ಅವರು ಇಷ್ಟು ದೊಡ್ಡ ಹಾಗೂ ಪ್ರತಿಷ್ಠಿತ ಪ್ರಶಸ್ತಿಯನ್ನು ಸ್ವೀಕರಿಸುವಾಗ ತಮ್ಮ ಹೆಸರನ್ನು ಸ್ಮರಿಸಬೇಕಾದ ಯಾವುದೇ ಅಗತ್ಯವಿರಲಿಲ್ಲ. ಆದರೆ ಇದು ಅವರ ದೊಡ್ಡತನ ಹಾಗೂ ಅವರು ಎಷ್ಟು ನಮ್ರರು ಎಂಬುದನ್ನು ತೋರಿಸುತ್ತದೆ. ಅವರು ಇಂದಿಗೂ ತಮ್ಮ ಹಳೆಯ ಪಯಣವನ್ನು ಮರೆತಿಲ್ಲ. ಆತ ತನ್ನ ಸ್ನೇಹಿತರನ್ನ ಎಂದಿಗೂ ಮರೆಯುವುದಿಲ್ಲ, ಏಕೆಂದರೆ ಆತನ ಸ್ನೇಹತರೇ ಆತನನ್ನು ತುಂಬಾ ಪ್ರೋತ್ಸಾಹಿಸಿದ್ದು. ತನ್ನ ಸಂಬAಧಿಕರನ್ನು ಭೇಟಿ ಮಾಡಲು ಬಂದರೆ, ತಪ್ಪದೇ ಸ್ನೇಹಿತರನ್ನೂ ಸಹ ಭೇಟಿ ಮಾಡಲು ಮರೆಯುವುದಿಲ್ಲ,” ಎಂದು ರಾಜ್ ಬಹದ್ದೂರ್ ತಿಳಿಸಿದರು.
ರಜನಿಕಾಂತ್ ಅವರೊಂದಿಗಿನ ೫೦ ವರ್ಷಗಳ ಹಳೆಯ ಸ್ನೇಹದ ಕುರಿತು ಮಾತನಾಡುತ್ತಾ ರಾಜ್ ಬಹದ್ದೂರ್ ಅವರು ತಾವು ಶಿವಾಜಿ ರಾವ್ ಗಾಯಕ್ವಾಡ್ (ರಜನಿಕಾಂತ್) ಅವರನ್ನು ೧೯೭೦ರಲ್ಲಿ ಬಸ್ ನಿರ್ವಾಹಕರಾಗಿ ಕೆಲಸಕ್ಕೆ ಸೇರಿದಾಗ ಭೇಟಿ ಮಾಡಿದರಂತೆ. ಆಗ ರಾಜ್ ಬಹದ್ದೂರ್ ಅವರು ಬಸ್ ಚಾಲಕನಾಗಿ ಕೆಲಸಕ್ಕೆ ಸೇರಿದರು.
“ಇತರರಂತೆ ರಜನಿಕಾಂತ್ ಸಹ ಸಾಮಾನ್ಯ ಬಸ್ ನಿರ್ವಾಹಕನಾಗಿದ್ದರೂ ಸಹ ಆತನಲ್ಲಿ ಏನೋ ಒಂದು ರೀತಿಯ ವಿಶೇಷತೆಯಿತ್ತು. ಉದ್ಯೋಗಿಗಳ ಸಂಘದ ವತಿಯಿಂದ ನಾಟಕಗಳನ್ನು ಆಯೋಜಿಸಿದಾಗ ಅದರಲ್ಲಿ ಆತ ಮುಖ್ಯ ಭೂಮಿಕೆಯನ್ನು ನಿರ್ವಹಿಸುತ್ತಿದ್ದ. ಆಗಿನಿಂದಲೇ ಆತ ನಟನೆಯಲ್ಲಿ ನಿಪುಣನಾಗಿದ್ದ. ಆದರೆ ಎಂದಿಗೂ ದೊಡ್ಡ ನಟನಾಗಬೇಕೆಂಬ ಯಾವುದೇ ಹಂಬಲ ಆತನಲ್ಲಿ ಇರಲಿಲ್ಲ. ಒಮ್ಮೆ ನಾನು ಆತನಿಗೆ ನಿನ್ನಲ್ಲಿ ಚಲನಚಿತ್ರ ನಟನಾಗುವ ಎಲ್ಲಾ ಅರ್ಹತೆಗಳೂ ಇವೆ ಎಂದಿದ್ದೆ. ಆದರೆ ಆತನಿಗೆ ಚಲನಚಿತ್ರಗಳಲ್ಲಿ ನಟಿಸುವ ಯಾವುದೇ ಆಸೆ ಇರಲಿಲ್ಲ. ನಾನು ಆತನನ್ನು ತುಂಬಾ ಪ್ರೋತ್ಸಾಹಿಸಿದೆ. ಆರಂಭದಲ್ಲಿ ಆತನನ್ನು ಈಗಿನ ಚೆನ್ನೈನಲ್ಲಿರುವ ಮಡ್ರಾಸ್ ಫಿಲಂ ಇನ್ಸ್ಟಿಟ್ಯೂಟ್ನಲ್ಲಿ ತರಬೇತಿಗೆ ಕಳುಹಿಸಲಾಯಿತು. ಒಂದು ಕಾರ್ಯಕ್ರಮದಲ್ಲಿ ತಮಿಳು ಚಲನಚಿತ್ರರಂಗದ ಖ್ಯಾತ ನಿರ್ದೇಶಕ ಕೆ. ಬಾಲಚಂದರ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಆ ಕಾರ್ಯಕ್ರಮದಲ್ಲಿ ನಾಟಕವನ್ನು ಏರ್ಪಡಿಸಲಾಗಿತ್ತು. ರಜನಿಕಾಂತ್ ಆ ನಾಟಕದಲ್ಲಿ ಪಾತ್ರ ನಿರ್ವಹಿಸಿದ್ದರು,” ಎಂದು ರಾಜ್ ಬಹದ್ದೂರ್ ವಿವರಿಸಿದರು.
“ಕಾರ್ಯಕ್ರಮದ ನಂತರ ಬೆಂಗಳೂರಿಗೆ ಹಿಂದಿರುಗಿದ ರಜನಿ, ಕೆ. ಬಾಲಚಂದರ್ ಅವರು ತನಗೆ ತಮಿಳು ಭಾಷೆಯನ್ನು ಕಲಿಯುವಂತೆ ಹೇಳಿದ್ದಾರೆ ಎಂದು ತಿಳಿಸಿದ್ದರು. ಆದರೆ ಮತ್ತೇನನ್ನೂ ಹೇಳಿಲಿಲ್ಲ. ಆಗ ನಾನು ಬಾಲಚಂದ್ರರಂತಹ ದೊಡ್ಡ ನಿರ್ದೇಶಕರೊಬ್ಬರು ಹಾಗೆ ಹೇಳಿದ್ದರೆ, ನಿನಗೆ ಉತ್ತಮ ಭವಿಷ್ಯವಿದೆ ಎಂದಿದ್ದೆ. ನನಗೆ ತಮಿಳು ಗೊತ್ತಿದ್ದರಿಂದ ನಾವಿಬ್ಬರೂ ಕೇವಲ ತಮಿಳಿನಲ್ಲಿ ಮಾತನಾಡಲು ನಿರ್ಧರಿಸಿದೆವು. ಮುಂದಿನ ಎರಡು ತಿಂಗಳಲ್ಲಿ ರಜನಿಕಾಂತ್ ಸ್ಪಷ್ಟವಾಗಿ ತಮಿಳಿನಲ್ಲಿ ಮಾತನಾಡಲು ಕಲಿತರು,” ಎಂದರು.
“ಮುಂದಿನ ಬಾರಿ ರಜನಿ ಅವರು ಬಾಲಚಂದರ್ ಅವರನ್ನು ಭೇಟಿ ಮಾಡಿದಾಗ ಬಾಲಚಂದರ್ ಅವರು ತಾವು ನಿರ್ದೇಶಿಸುತ್ತಿರುವ ಒಂದು ಚಲನಚಿತ್ರದಲ್ಲಿ ಒಂದು ಪಾತ್ರವಿದೆ, ಆದರೆ ನಿನಗೆ ತಮಿಳು ಬಾರದೆ ಇರುವ ಕಾರಣದಿಂದಾಗಿ ನಿನಗೆ ಪಾತ್ರ ನೀಡಲಾಗುತ್ತಿಲ್ಲ ಎಂದರAತೆ. ಆಗ ರಜನಿ ತಮಿಳು ಭಾಷೆಯಲ್ಲೇ ನನಗೂ ತಮಿಳು ಬರುತ್ತದೆ ಎಂದು ಉತ್ತರಿಸಿದರಂತೆ. ಕೇವಲ ಎರಡು ತಿಂಗಳೊಳಗೆ ಭಾಷೆಯನ್ನು ಕಲಿತಿದ್ದನ್ನು ನೋಡಿದ ಬಾಲಚಂದರ್ ಅವರಿಗೆ ತುಂಬಾ ಆಶ್ಚರ್ಯವಾಯಿತಂತೆ. ಈ ಪ್ರಕಾರವಾಗಿ ರಜನಿಗೆ ೧೯೭೫ರಲ್ಲಿ ‘ಅಪೂರ್ವ ರಾಗಂಗಳ್’ ಚಿತ್ರದಲ್ಲಿ ಪಾತ್ರ ನಿರ್ವಹಿಸುವ ಅವಕಾಶ ಲಭಿಸಿತಂತೆ. ನಂತರ ಆತ ಎಂದಿಗೂ ಹಿಂದಿರುಗಿ ನೋಡಲೇ ಇಲ್ಲ. ಮುಂದೆ ನಡೆದದೆಲ್ಲಾ ಚರಿತ್ರೆ,” ಎಂದರು.
ರಾಜ್ ಬಹದ್ದೂರ್ ಅವರು ೨೦೦೫ರಲ್ಲಿ ಬಿಎಂಟಿಸಿ ಇಂದ ಚಾಲಕರಾಗಿ ನಿವೃತ್ತರಾಗಿದ್ದಾರೆ. ಆದರೆ ಇಬ್ಬರ ನಡುವಿನ ಸ್ನೇಹ ಮಾತ್ರ ಹಾಗೇ ಇದೆ. “ರಜನಿ ಕೇವಲ ನನ್ನೊಂದಿಗೆ ಮಾತ್ರವಲ್ಲ. ಬದಲಿಗೆ ತನ್ನ ಎಲ್ಲಾ ಸ್ನೇಹಿತರೊಂದಿಗೂ ದಶಕಗಳಿಂದಲೂ ಇದೇ ರೀತಿ ಸಂಬAಧವನ್ನು ಉಳಿಸಿಕೊಂಡು ಬಂದಿದ್ದಾರೆ,” ಎಂದ ರಾಜ್ ಬಹದ್ದೂರ್ ತಮ್ಮ ಸ್ನೇಹಿತ ರಜನಿಯನ್ನು ನೋಡಲು ಬುಧವಾರ ಚೆನ್ನೈಗೆ ಹೊರಟರು.
ಸುದ್ದಿ ಮೂಲ: ಇಂಡಿಯನ್ ಎಕ್ಸ್ಪ್ರೆಸ್
Key words: friend – Raj Bahadur -presented – Rajinikanth -Dadasaheb Phalke Award