ಬೆಂಗಳೂರು, ಜನವರಿ 11, 2022 (www.justkannada.in): ಕರ್ನಾಟಕದ ಉತ್ತರ ಭಾಗದ ಬಯಲು ಪ್ರದೇಶಗಳಲ್ಲಿ, ವಿಶೇಷವಾಗಿ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನಲ್ಲಿ ಹೆಚ್ಚಾಗಿ ಬೆಳೆಯುವ ಅತ್ಯಂತ ಅಪರೂಪದ ವಿಶೇಷ ನಿಂಬೆ ಹಣ್ಣಿಗೆ ಶೀಘ್ರದಲ್ಲೇ ಜಿಐ ಟ್ಯಾಗ್ (ಭೌಗೋಳಿಕ ಸೂಚ್ಯಂಕ) ಲಭಿಸಲಿದೆ.
‘ಕಗ್ಝಿ ನಿಂಬೆ’ ಎಂದೇ ಜನಪ್ರಿಯತೆ ಗಳಿಸಿರುವ ಈ ತಳಿಯ ನಿಂಬೆ, ಮಣಿಪುರದ ‘ಕಚ್ಚೈ ನಿಂಬೆ’ಯ ನಂತರ ‘ಜಿಐ ಟ್ಯಾಗ್’ ಬಿರುದನ್ನು ಪಡೆಯಲಿರುವ ಭಾರತದಲ್ಲಿ ಬೆಳೆಯುವ ಎರಡನೆಯ ನಿಂಬೆ ತಳಿಯಾಗಿದೆ.
ಐದು ವರ್ಷಗಳ ಪ್ರಯತ್ನದ ನಂತರ, ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾಲಯದ ವಿಜ್ಞಾನಿಗಳ ಬೆಂಬಲದೊಂದಿಗೆ ಕರ್ನಾಟಕ ರಾಜ್ಯ ನಿಂಬೆ ಅಭಿವೃದ್ಧಿ ಮಂಡಳಿ (ಕೆಎಸ್ಎಲ್ಡಿಬಿ), ಚೆನ್ನೈನಲ್ಲಿರುವ ಜಿಐ ರಿಜಿಸ್ಟ್ರಿ ಆಫ್ ಇಂಡಿಯಾದಿಂದ ಅಂತಿಮ ತೀರುವಳಿಗಾಗಿ ಕಾಯುತ್ತಿದೆ.
ಮಧ್ಯ ಭಾರತದ ವಿಶೇಷ ಹಾಗೂ ಅಪರೂಪದ ತಳಿಯಾಗಿರುವ ಈ ‘ಕಗ್ಝಿ ನಿಂಬೆ’ಯ ಸಾಗುವಳಿಯನ್ನು ವಿಜಯಪುರ ಜಿಲ್ಲೆಯಲ್ಲಿ ೧೯೦೦ರ ದಶಕದ ಆರಂಭದಲ್ಲಿ ಕೈಗೊಳ್ಳಲಾಯಿತು. ಆದರೆ ಇಂಡಿಯಲ್ಲಿ ಬೆಳೆಯುವಂತಹ ಈ ತಳಿಯ ನಿಂಬೆ ವಿಶೇಷ ಮೇಲ್ಮೈ ರಚನೆ ಹಾಗೂ ಅತೀ ಹೆಚ್ಚಿನ ಆಮ್ಲೀಯ ಮೌಲ್ಯವನ್ನು (unique texture and high acidic value) ಹೊಂದಿದೆ.
ಇಂಡಿಯ ಶಾಸಕರಾದ ಯಶವಂತರಾಯಗೌಡ ವಿ. ಪಾಟೀಲ ಅವರು ಈ ಸಂಬಂಧ ಮಾತನಾಡುತ್ತಾ, ಈ ವಿಶೇಷ ತಳಿ ನಿಂಬೆಯ ಚರಿತ್ರೆ ಹಾಗೂ ವಿಶೇಷತೆಗಳ ವಿವರಗಳಿರುವ ದಾಖಲಾತಿಗಳನ್ನು ಬಹಳ ಹಿಂದೆಯೇ ಸಂಬಂಧಪಟ್ಟವರಿಗೆ ಸಲ್ಲಿಸಲಾಗಿತ್ತು. “ಆದರೆ ರಾಜ್ಯ ಸರ್ಕಾರದ ವತಿಯಿಂದ ಇಷ್ಟು ವರ್ಷಗಳ ಕಾಲ ಸೂಕ್ತ ಅನುಸರಣಾ ಕ್ರಮದ ಕೊರತೆಯಿಂದಾಗಿ ಈ ವಿಷಯ ಹಿನ್ನೆಲೆಗೆ ಸರಿದಿತ್ತು. ಆದರೆ ಈಗ ಬಾಗಲಕೋಟೆಯ ವಿಜ್ಞಾನಿಗಳು ಈ ಹಣ್ಣಿನ ವಿಶೇಷ ಗುಣಗಳಿಗೆ ಸಂಬಂಧಪಟ್ಟ ಒಳನೋಟಗಳು ಹಾಗೂ ಪೂರಕ ದಾಖಲಾತಿಗಳನ್ನು ಅಂತಿಮ ತೀರುವಳಿಗಾಗಿ ಸಲ್ಲಿಸಿದ್ದಾರೆ,” ಎಂದು ವಿವರಿಸಿದರು.
ಕೆಎಸ್ಎಲ್ಡಿಬಿಯ ವ್ಯವಸ್ಥಾಪಕ ನಿರ್ದೇಶಕರಾದ ಸಂತೋಷ್ ಸಪ್ಪಂಡಿ ಅವರು, “ಈ ಹಿಂದೆ ಜಿಐ ನೋಂದಣಾಧಿಕಾರಿಯವರು ಕೆಲವು ಪ್ರಶ್ನೆಗಳನ್ನು ಕೇಳಿದ್ದರು. ಆ ಹಿನ್ನೆಲೆಯಲ್ಲಿ ಈ ವಿಶೇಷ ತಳಿಯ ನಿಂಬೆ ಹಣ್ಣಿನ ಗುಣಮಟ್ಟಕ್ಕೆ ಸಂಬಂಧಪಟ್ಟ ಎಲ್ಲಾ ಅನುಮಾನಗಳಿಗೂ ಸ್ಪಷ್ಟನೆ ಒದಗಿಸುವ ಸಲುವಾಗಿಯೇ ಒಂದು ತಜ್ಞರ ಸಮಿತಿಯನ್ನು ರಚಿಸಲಾಗಿತ್ತು. ಕಳೆದ ಕೆಲವು ತಿಂಗಳುಗಳಲ್ಲಿ ಮಂಡಳಿಯು, ಚೆನ್ನೈನಲ್ಲಿರುವ ಜಿಐ ಕಚೇರಿ ಕೇಳಿರುವ ಸುಮಾರು ೨೦ಕ್ಕೂ ಹೆಚ್ಚಿನ ಅನುಮಾನಗಳು ಹಾಗೂ ಆಕ್ಷೇಪಗಳಿಗೆ ಸ್ಪಷ್ಟನೆಯನ್ನು ನೀಡಿ ಅನುಮಾನಗಳ್ನು ಬಗೆಹರಿಸಿದೆ. ಅವರು ಹಣ್ಣಿನ ಚರಿತ್ರೆ, ಸಾಗುವಳಿ ಪ್ರದೇಶ, ಅದರಲ್ಲಿರುವ ಆಮ್ಲೀಯ ಮೌಲ್ಯಗಳ ಅಧ್ಯಯನಗಳ ಜೊತೆಗೆ ಇನ್ನೂ ಅನೇಕ ತಾಂತ್ರಿಕ ವಿವರಗಳನ್ನು ಕೋರಿದ್ದರು. ಕೊನೆಗೂ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಹಿತೈಷಿಗಳ ಶ್ರಮದಿಂದ ಇನ್ನೊಂದು ಅಥವಾ ಎರಡು ತಿಂಗಳಲ್ಲಿ ಇಂಡಿಯ ನಿಂಬೆಗೆ ‘ಜಿಐ ಟ್ಯಾಘ್’ ದೊರೆಯುವ ನಿರೀಕ್ಷೆ ಇದೆ,” ಎಂದು ವಿವರಿಸಿದರು.
ಇತರೆ ಜನಪ್ರಿಯ ತಳಿಗಳ ಹೋಲಿಕೆಯಲ್ಲಿ ಇಂಡಿಯ ಈ ‘ಕಗ್ಝಿ ನಿಂಬೆ’ಯ ಸಿಪ್ಪೆ ತೆಳುವಾಗಿದ್ದು, ಹೆಚ್ಚು ರಸಭರಿತವಾಗಿರುತ್ತವೆ. ಒಟ್ಟಾರೆ ಹಣ್ಣಿನ ತೂಕವೂ ಹೆಚ್ಚಾಗಿರುತ್ತದೆ. ಈ ತಳಿಯ ನಿಂಬೆಯಲ್ಲಿ ascorbic acid ಅಂಶ ಹೆಚ್ಚಾಗಿರುತ್ತದೆ.
ಕರ್ನಾಟಕ ರಾಜ್ಯ ರಾಷ್ಟ್ರಮಟ್ಟದಲ್ಲಿ ನಾಲ್ಕನೇ ಅತೀ ದೊಡ್ಡ ನಿಂಬೆ ಉತ್ಪಾದಿಸುವ ರಾಜ್ಯವಾಗಿದ್ದು, ರಾಜ್ಯದಲ್ಲಿ ಬೆಳೆಯುವ ಒಟ್ಟು ಪ್ರಮಾಣದ ನಿಂಬೆಯ ಪೈಕಿ ವಿಜಯಪುರದ ಪಾಲು ಶೇ.೬೦ರಷ್ಟಿದೆ. ಇಂಡಿ ತಾಲ್ಲೂಕು ಒಂದರಲ್ಲೇ ಜಿಲ್ಲೆಯ ಒಟ್ಟು ನಿಂಬೆ ಉತ್ಪಾದನೆಯ ಪೈಕಿ ೩೦%-೪೦% ನಿಂಬೆಯನ್ನು ಬೆಳೆಯಲಾಗುತ್ತದೆ. ಈ ಭಾಗದಲ್ಲಿ ಸುಮಾರು ೧೫,೦೦೦ಕ್ಕೂ ಹೆಚ್ಚಿನ ರೈತರು ನಿಂಬೆ ಬೇಸಾಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್
Key words: GI -tag soon -special –lemon