ಸಭೆ ಆಯೋಜಿಸಿ ನಂದಿನಿ ತುಪ್ಪದ ದರದ ಬಗ್ಗೆ ಚರ್ಚಿಸೋಣ- ಟಿಟಿಡಿಗೆ ಕೆಎಂಎಫ್ ಪತ್ರ.

ಬೆಂಗಳೂರು, ಆಗಸ್ಟ್ 3,2023(www.justkannada.in):  ತಿರುಪತಿಯ ಲಡ್ಡು ಪ್ರಸಾದಕ್ಕೆ ನಂದಿನಿ ತುಪ್ಪ ಪೂರೈಕೆ ಸ್ಥಗಿತ ವಿಚಾರ  ಸುದ್ದಿಯಾದ ಬೆನ್ನಲ್ಲೆ ಎಚ್ಚೆತ್ತುಕೊಂಡ ಕೆಎಂಎಫ್ ಇದೀಗ ಟಿಟಿಡಿಗೆ ಪತ್ರ ಬರೆದು, ನಾವು ನಿಮಗೆ ತುಪ್ಪ ಪೂರೈಕೆ ಮಾಡಲು ತುಂಬಾ ಉತ್ಸುಕರಾಗಿದ್ದೇವೆ. ದರದ ಬಗ್ಗೆ ಚರ್ಚಿಸೋಣ ಸಭೆ ಆಯೋಜಿಸಿ ಎಂದು ತಿಳಿಸಿದೆ.

ಟಿಟಿಡಿಯ ಕಾರ್ಯನಿರ್ವಾಹಕ ಅಧಿಕಾರಿಗೆ  ಕೆಎಂಎಫ್ ಪತ್ರ ಬರೆದಿದ್ದು, “ನಾವು ಪ್ರತಿ ವರ್ಷ 30 ಸಾವಿರ ಮೆಟ್ರಿಕ್ ಟನ್ ತುಪ್ಪ ಉತ್ಪಾದನೆ ಮಾಡುತ್ತೇವೆ. ನಾವು ನಿಮಗೆ  ನಂದಿನಿ ತುಪ್ಪ ಪೂರೈಕೆ ಮಾಡಲು ತುಂಬಾ ಉತ್ಸುಕರಾಗಿದ್ದೇವೆ. ಒಂದು ಸಭೆಯನ್ನು ನಮ್ಮ ಜೊತೆ ಆಯೋಜನೆ ಮಾಡಿ ದರದ ಬಗ್ಗೆ ಚರ್ಚೆ ಮಾಡೋಣ” ಎಂದು ಪತ್ರದಲ್ಲಿ ತಿಳಿಸಿದೆ.

ನಮ್ಮದು ಸಹಕಾರ ಸಂಸ್ಥೆ ಯಾಗಿದ್ದು, ಟೆಂಡರ್​ನಲ್ಲಿ ಭಾಗಿಯಾಗಿಲ್ಲ. ತುಂಬಾ ಗುಣಮಟ್ಟದ ತುಪ್ಪವನ್ನು ನಂದಿನಿ ಗ್ರಾಹಕರಿಗೆ ತಲುಪಿಸುತ್ತಾ ಬಂದಿದೆ. ಹೀಗಾಗಿ ಟಿಟಿಡಿಗೂ ಕೂಡ ತುಪ್ಪ ನೀಡಲು ನಾವು ಖುಷಿಯಿಂದ ಕಾತರರಾಗಿದ್ದೇವೆ. ಒಂದು ಸಭೆಯನ್ನು ಆಯೋಜನೆ ಮಾಡಿ  ಎಂದು ಟಿಟಿಡಿಗೆ ಕೆಎಂಎಫ್ ಹೇಳಿದೆ ಎನ್ನಲಾಗಿದೆ.

ತಿರುಪತಿ ಲಡ್ಡು ತಯಾರಿಕೆಗಾಗಿ ಸರಬರಾಜು ಆಗುತ್ತಿದ್ದ ನಂದಿನಿ ತುಪ್ಪವನ್ನು ಕಳೆದ ಒಂದು ವರ್ಷದ ಹಿಂದೆಯೇ ಅಂದರೇ ಬಿಜೆಪಿ ಸರ್ಕಾರದ ಅವಧಿಯಲ್ಲೇ ಸ್ಥಗಿತಗೊಳಿಸಲಾಗಿದೆ ಎನ್ನಲಾಗಿತ್ತು. ಇದೀಗ  ಈ ವಿಚಾರ ಮುನ್ನೆಲೆಗೆ ಬಂದಿದ್ದು ಈ ಬೆನ್ನಲ್ಲೆ ಕೆಎಂಎಫ್ ಪತ್ರ ಬರೆದಿದೆ.

Key words: meeting – discuss – price – Nandini ghee – KMF -letter – TTD.