ಬೆಂಗಳೂರು,ಜನವರಿ,18,2022(www.justkannada.in): ಗಣರಾಜ್ಯೋತ್ಸವ ಪರೇಡ್ ಸ್ತಬ್ಧಚಿತ್ರಗಳ ಆಯ್ಕೆಯಲ್ಲಿ ಶ್ರೀ ಶ್ರೀ ನಾರಾಯಣ ಗುರುಗಳ ಚಿತ್ರವುಳ್ಳ ಕೇರಳ ರಾಜ್ಯದ ಸ್ತಬ್ಧಚಿತ್ರವನ್ನು ತಿರಸ್ಕಾರ ಮಾಡಿದ್ದನ್ನು ಪ್ರಶ್ನೆ ಮಾಡಿದ್ದನ್ನೇ ಬಿಜೆಪಿ ವಿವಾದ ಎಂದು ಬಿಂಬಿಸುತ್ತಿದೆ. ಸೂಕ್ಷ್ಮ ವಿಚಾರಗಳಿಗೆ ವಿವಾದದ ಸ್ಪರ್ಶ ನೀಡುವುದು @BJP4Karnataka ಮತ್ತು @CTRavi_BJP ಅವರಿಗೆ ಕರತಲಾಮಲಕ ಎಂದು ಜೆಡಿಎಸ್ ಘಟಕ ಕಿಡಿಕಾರಿದೆ.
ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಜೆಡಿಎಸ್, ವಿವಾದವಲ್ಲದ ವಿಚಾರ ಅಂದರೇನು? ನಾರಾಯಣ ಗುರುಗಳಿಗೆ ಆದ ಅನ್ಯಾಯವನ್ನು ಪ್ರಶ್ನೆ ಮಾಡಬಾರದಿತ್ತೆ? ಕೇರಳ ಸರ್ಕಾರ ಸ್ತಬ್ಧಚಿತ್ರದ ಮಾರ್ಗದರ್ಶಿ ಸೂತ್ರಗಳನ್ನು ಪಾಲಿಸಿಲ್ಲ ಎಂದಾದರೆ ಆ ಮಾರ್ಗದರ್ಶಿ ಸೂತ್ರಗಳನ್ನು ಸಾರ್ವಜನಿಕವಾಗಿ ದೇಶದ ಮುಂದಿಡಿ. ಅರೆಬರೆ ವಿವರ ಬೇಡ.
ಕೇರಳದ ಜತೆಗೆ ತಮಿಳುನಾಡು, ಪ.ಬಂಗಾಳ ರಾಜ್ಯಗಳ ಸ್ತಬ್ಧಚಿತ್ರಗಳನ್ನು ಕೂಡ ನಿರಾಕರಿಸಲಾಗಿದೆ. ಪ್ರಾದೇಶಿಕ ಪಕ್ಷಗಳ ಆಡಳಿತ ಇರುವ ರಾಜ್ಯಗಳ ಸ್ತಬ್ಧ ಚಿತ್ರಗಳ ಆಯ್ಕೆ ಬಗ್ಗೆ ಏಕೆ ತಾರತಮ್ಯ ನೀತಿ? ಪ್ರಾದೇಶಿಕ ಆಸ್ಮಿತೆಯ ಕತ್ತು ಹಿಸುಕುವ ಪ್ರಯತ್ನವೇ ಇದು ಎಂಬ ಅನುಮಾನ ಬರುತ್ತಿದೆ ಎಂದು ಜೆಡಿಎಸ್ ವಾಗ್ದಾಳಿ ನಡೆಸಿದೆ.
ಆಯ್ಕೆ ಸಮಿತಿಯಲ್ಲಿ ಇರುವವರು ಯಾರು? ಅವರ ಹಿನ್ನೆಲೆ ಏನು? ಅವರ ಆಯ್ಕೆಯ ಬಗ್ಗೆ ಇರುವ ಮಾನದಂಡ ಏನು? ಇದು ಕೂಡ ದೇಶಕ್ಕೆ ಗೊತ್ತಾಗಬೇಕಿದೆ. ಸ್ತಬ್ಧಚಿತ್ರಗಳ ಆಯ್ಕೆಯಲ್ಲಿ ಕೇಂದ್ರ ಸರಕಾರದ ಪಾತ್ರ ಇಲ್ಲ ಎನ್ನುವ ಬಿಜೆಪಿ, ಪ್ರಧಾನಿಗಳಿಗೆ ಶ್ರೀ ನಾರಾಯಣ ಗುರುಗಳ ಬಗ್ಗೆ ತುಂಬಾ ಗೌರವ ಇದೆ ಎನ್ನುತ್ತೀರಿ. ಏನಿದು ಎರಡು ನಾಲಗೆಯ ತುತ್ತೂರಿ?
ಈ ವಿವಾದವನ್ನು ಹುಟ್ಟು ಹಾಕಿದವರು ಶ್ರೀ ಹೆಚ್.ಡಿ.ಕುಮಾರಸ್ವಾಮಿ ಅವರಲ್ಲ, ಬಿಜೆಪಿ ಮತ್ತು ಕೇಂದ್ರ ಸರ್ಕಾರ. ವಿವಿಧತೆಯಲ್ಲಿ ಏಕತೆಯುಳ್ಳ ಭಾರತವನ್ನು ಸಾಂಸ್ಕೃತಿಕವಾಗಿ ಬೆಂಗಾಡು ಮಾಡುವ ಇಂಥ ಹುನ್ನಾರಗಳು ಇನ್ನಾದರೂ ನಿಲ್ಲಲ್ಲಿ. ಶ್ರೀ ನಾರಾಯಣ ಗುರುಗಳ ಸ್ತಬ್ಧಚಿತ್ರದಲ್ಲಿ ಇದ್ದ ನ್ಯೂನತೆಗಳು ಏನು? ಎಂದು ತಿಳಿಯುವ ಹಕ್ಕು ದೇಶಕ್ಕಿದೆ ಎನ್ನುವುದು ನಮ್ಮ ಭಾವನೆ ಎಂದು ಟ್ವೀಟ್ ಮಾಡಿದೆ.
Key words: BJP -controversy – issues-JDS