ಹಾಸನ,ನವೆಂಬರ್,8,2021(www.justkannada.in): ವರ್ಷಕ್ಕೊಮ್ಮೆ ಬಾಗಿಲು ತೆಗೆಯುವ ಪ್ರಸಿದ್ಧ ಹಾಸನಾಂಬ ದೇಗುಲದ ಹಾಸನಾಂಬಾ ಉತ್ಸವ ಅಕ್ಟೋಬರ್ 28ರಿಂದ ನವೆಂಬರ್ 6ರವರೆಗೆ ಜರುಗಿದ್ದು, 10 ದಿನಗಳಲ್ಲಿ ಲಕ್ಷಾಂತರ ಭಕ್ತರು ಹಾಸನಾಂಬೆ ದೇವಿ ದರ್ಶನ ಪಡೆದಿದ್ದಾರೆ.
ಈ ಮಧ್ಯೆ ಹಾಸನಾಂಬೆ ದೇಗುಲದ ಹುಂಡಿ ಎಣಿಕೆ ಕಾರ್ಯ ಆರಂಭವಾಗಿದ್ದು, ನೂರಾರು ಭಕ್ತರು ನಾನಾ ರೀತಿಯ ಪತ್ರ ಬರೆದು ಹಾಸನಾಂಬೆಗೆ ತಮ್ಮ ತಮ್ಮ ಬೇಡಿಕೆಗಳನ್ನ ಮುಂದಿಟ್ಟಿದ್ದಾರೆ. ಕಾಣಿಕೆ ಜೊತೆಗೆ ಭಕ್ತರ ವಿಭಿನ್ನ ಬೇಡಿಕೆಯ ಪತ್ರಗಳು ಕೂಡ ಪತ್ತೆಯಾಗಿದ್ದು ಎಲ್ಲರ ಗಮನ ಸೆಳೆಯುತ್ತಿವೆ.
ಹೊಳೇನರಸೀಪುರ ಎಂಎಲ್ ಎ ಬದಲಾಗಬೇಕು. ಹೆಚ್.ಡಿ.ರೇವಣ್ಣ ಕುಟುಂಬದ ಸದಸ್ಯರು ಜನರ ಪ್ರಾಣ ಹಿಂಡುತ್ತಿದ್ದು, ಅವರ ಕುಟುಂಬದವರನ್ನೆಲ್ಲಾ ಸೋಲಿಸು ತಾಯಿ. ಹೊಳೆನರಸಿಪುರ ಜನತೆಗೆ ಒಳಿತು ಮಾಡು ಎಂದು ಬೇಡಿಕೆ ಇಟ್ಟಿದ್ದಾರೆ.
ಹಾಗೆಯೇ ಅಮ್ಮಾ ಆ ಧರ್ಮಾತ್ಮ ಪುನೀತ್ ರಾಜ್ ಕುಮಾರ್ ರನ್ನ ಸಾಯಸುವ ಬದಲು ಈ ರಾಜಕೀಯದಲ್ಲಿ ನಾಟಕವಾಡಿ ಅವರು ತಿಂದು ತೇಗಿ ಅವರ ಮೊಮ್ಮಕ್ಕಳೂ ತಿಂದು ತೇಗಿದರೂ ಕರಗದಷ್ಟು ಆಸ್ತಿ ಮಾಡಿ ಸಭೆಗಳಲ್ಲಿ ನಾಟಕ ಮಾಡುವಂತಹ ರಾಜಕಾರಣಿಗಳನ್ನ ಸಾಯಿಸು ಆಗ ಕರ್ನಾಟಕ ರಾಜ್ಯ ಮುಂದುವರೆಯುತ್ತದೆ ಎಂದು ಭಕ್ತನೊಬ್ಬ ತಾಯಿ ಹಾಸನಾಂಬೆ ಬಳಿ ಮನವಿ ಸಲ್ಲಿಸಿದ್ದಾನೆ.
ಸಾಮಾನ್ಯವಾಗಿ ಸಂತಾನ ಪ್ರಾಪ್ತಿಗಾಗಿ, ಗಂಡನ ದುಶ್ಚಟ ನಿವಾರಣೆಯಾಗಲಿ, ಆರ್ಥಿಕ ಸಂಕಷ್ಟ ಪರಿಹಾರವಾಗಲಿ, ಕೆಲಸ ಸಿಗಲಿ ಇಂತಹ ಬೇಡಿಕೆಗಳನ್ನು ದೇವರ ಮುಂದಿಡುವುದು ಸಾಮಾನ್ಯ. ಆದರೆ ಹಾಸನಾಂಬೆಗೆ ವಿಚಿತ್ರ ಬೇಡಿಕೆಗಳನ್ನು ಮುಂದಿಟ್ಟು ಭಕ್ತರು ದೇವಿ ಮೊರೆ ಹೋಗಿದ್ದಾರೆ.
ಮತ್ತೊಬ್ಬರು ಒಂದು ವರ್ಷದಲ್ಲಿ ಗಂಡು ಮಗುವಾದರೆ 5000 ರೂಪಾಯಿ ಕಾಣಿಕೆ ಹಾಕುವುದಾಗಿ ಪತ್ರ ಬರೆದಿದ್ದಾರೆ. ವಿದ್ಯಾರ್ಥಿಯೊಬ್ಬ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಪಾಸ್ ಆಗುವಂತೆ ಮಾಡು ಎಂದು ಬೇಡಿದ್ದರೆ, ಇನ್ನೋರ್ವ ಪಿಯುಸಿಯಲ್ಲಿ ಶೇ.90ರಷ್ಟು ಅಂಕ ಬರುವಂತೆ ಮಾಡು ಎಂದು ಬೇಡಿಕೆ ಇಟ್ಟಿದ್ದಾನೆ. ಯುವತಿಯೊಬ್ಬಳು ತಾನು ಇಷ್ಟಪಟ್ಟ ಹುಡುಗನ ಜೊತೆ ಮದುವೆ ಮಾಡಿಸು ಎಂದು ರಕ್ತದಲ್ಲಿ ಪತ್ರ ಬರೆದಿದ್ದರೆ, ಜಿಲ್ಲಾ ಕಸಾಪ ಪರಿಷತ್ ಗೆ ಸಾಹಿತಿ ಡಾ.ಎಚ್.ಎಲ್.ಮಲ್ಲೇಶ್ ಗೌಡರನ್ನು ಅಧ್ಯಕ್ಷರಾಗುವಂತೆ ಅನುಗ್ರಹಿಸು ತಾಯಿ ಎಂದು ಮತ್ತೊಬ್ಬರು ಪತ್ರ ಬರೆದಿದ್ದಾರೆ. ಹಾಗೆಯೇ ವಸೂಲಿ ಹಾಗೂ ದಂಧೆಕೋರರ ಕಪಿಮುಷ್ಠಿಯಿಂದ ಕನ್ನದಡ ಪವಿತ್ರ ಭವನ ಮುಕ್ತವಾಗಲಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಹೀಗೆ ನಾನಾ ರೀತಿಯ ಪತ್ರ ಬರೆದು ಭಕ್ತರು ಹಾಸನಾಂಬೆಗೆ ಮೊರೆಯಿಟ್ಟಿದ್ದಾರೆ.
Key words: Devotees – wrote – letter -like – Hassanambe